ಡಾಲೀ ಸಾಲ್ವಡಾರ್
1904-1989. ಸ್ಪೇನಿನ ಸರ್ರಿಯಲಿಸ್ಟ್ ಕಲಾವಿದ. ಲೇಖನಕಲೆಯಲ್ಲಿ, ಪುಸ್ತಕ ಕಲಾವಿನ್ಯಾಸದಲ್ಲಿ ಚಲನಚಿತ್ರ ನಿರ್ದೇಶನದಲ್ಲಿ, ರಂಗಮಂಟಪ ವಿನ್ಯಾಸದಲ್ಲಿ ಹಾಗೂ ಆಭರಣಗಳ ನಕ್ಷೆ ರಚಿಸುವಲ್ಲಿ ಕೂಡ ಪರಿಣತನಾಗಿದ್ದ. ಬಾರ್ಸಿಲೋನ ಮತ್ತು ಮಾಡ್ರಿಡ್‍ಗಳಲ್ಲಿ ಕಲಾವ್ಯಾಸಂಗ ಮಾಡಿದ. ಸಾನ್ ಫೆರ್ನಾಂಡೊ ಅಕಾಡೆಮಿಗೆ ಸೇರಿ (1921) ಕೆಲವೇ ವರ್ಷಗಳಲ್ಲಿ ಅಲ್ಲಿಂದ ಹೊರಹಾಕಲ್ಪಟ್ಟ (1926). ವಿದ್ಯಾರ್ಥಿದಶೆಯಲ್ಲಿರುವಾಗ ಈತ ಘನಾಕೃತಿ (ಕ್ಯುಬಿಸಂ) ಪಂಥಕ್ಕೆ ಸಂಬಂಧಿಸಿದ ಚಿತ್ರಗಳನ್ನೇ ರಚಿಸುತ್ತಿದ್ದ. 1923ರಲ್ಲಿ ಕೀರಿಕೋ ಹಾಗೂ ಕಾರಾದ ಕೃತಿಗಳಲ್ಲಿ ಕಂಡುಬರುವ ಆತ್ಮe್ಞÁನ ಪ್ರಚೋದಕ ಗುಣಗಳಿಂದ ಆಕರ್ಷಿತನಾದ. ಡಚ್ ಚಿತ್ರ ಶೈಲಿಯಿಂದಲೂ ಪ್ರಭಾವಿತನಾದ. ಬಾರ್ಸಿಲೋನ (1925) ಹಾಗೂ ಮಾಡ್ರಿಡ್ (1926) ಗಳಲ್ಲಿ ನಡೆಸಿದ ಕಲಾ ಪ್ರದರ್ಶನದಿಂದಾಗಿ ಜನಪ್ರಿಯನಾದ. 

ಡಾಲೀ 1928ರಲ್ಲಿ ಪಿಕಾಸೊನನ್ನು ಪ್ಯಾರಿಸಿನಲ್ಲಿ ಭೇಟಿಯಾದ. ಆತನ ಕ್ಯುಬಿಸಂ ಶೈಲಿ ಇವನನ್ನು ಆಕರ್ಷಿಸಿದ್ದುಂಟು. ಬ್ರೇಟೊನ್ ಮೀರೊ ಹಾಗೂ ಟ್ಯಾಗೀ ಮುಂತಾದ ಪ್ರಸಿದ್ಧ ಕಲಾವಿದರಿಂದ ಪ್ರಭಾವಿತನಾದ. 1929ರಲ್ಲಿ (ಪ್ಯಾರಿಸಿನಲ್ಲಿ) ನಿಯೊ ಸರ್ರಿಯಲಿಸ್ಟ್ ಪಂಥಕ್ಕೆ ಸೇರಿದ. ಕೆಲಕಾಲದಲ್ಲೆ ಈ ಪಂಥದ ಪ್ರಸಿದ್ಧ ನೇತಾರರಲ್ಲಿ ಪ್ರಮುಖನಾದ. ಲ್ವೀಸ್ ಬೂನೂಎಲ್‍ನ ಸಹಭಾಗಿತ್ವದಲ್ಲಿ ಎರಡು ಸರ್ರಿಯಲಿಸ್ಟ್ ಚಲನಚಿತ್ರಗಳನ್ನೂ ತಯಾರಿಸಿದ್ದುಂಟು. ಇವುಗಳಲ್ಲಿ ದಿ ಗೋಲ್ಡನ್ ಏಜ್ ಎಂಬ ಚಿತ್ರಕ್ಕೆ ಪ್ಯಾರಿಸಿನ ಪೊಲೀಸರು ಮುಟ್ಟುಗೋಲು ಹಾಕಿದರು, 1932ರಿಂದ ಈತನ ಕೃತಿಗಳು ಯೂರೋಪು, ಅಮೆರಿಕ ಹಾಗೂ ಏಷ್ಯಾಖಂಡಗಳಲ್ಲಿ ಪ್ರದರ್ಶಿತವಾಗಿದ್ದವು. 1934ರಲ್ಲಿ ಡಾಲೀ ಮೊದಲಬಾರಿಗೆ ಅಮೆರಿಕಕ್ಕೆ ತೆರಳಿದ. 1939ರಲ್ಲಿ ನ್ಯೂಯಾರ್ಕಿನಲ್ಲಿ ನಡೆದ ಜಾಗತಿಕ ಮೇಳದಲ್ಲಿ ಡಾಲೀಸ್ ಡ್ರೀಮ್ ಆಫ್ ವೀನಸ್ ಎಂಬ ಅಲಂಕಾರ ಮಂಟಪದ ವಿನ್ಯಾಸ ರಚಿಸಿದ್ದ. ಎರಡನೆಯ ಮಹಾಯುದ್ಧದ ಅನಂತರ ಪುನಃ ಯೂರೋಪಿನಲ್ಲಿ ಪ್ರವಾಸ ಮಾಡಿದ. 1956ರಲ್ಲಿ ಸಾರ್ಬೊನ್‍ನಲ್ಲಿ ಉಪನ್ಯಾಸ ನೀಡಿದ.

	ಡಾಲೀಯ ಕೃತಿಗಳಲ್ಲಿ ಪ್ರಮುಖವಾದುವು ಇವು : ದಿ ಪರ್ಸಿಸ್ಟೆನ್ಸ್ ಆಫ್ ಮೆಮೊರಿ (1931), ಸಾಫ್ಟ್ ಕನ್‍ಸ್ಟ್ರಕ್ಷನ್ ವಿತ್ ಬಾಯಿಲ್ಡ್ ಬೀನ್ಸ್, ಪ್ರಿಮಾನಿಷನ್ ಆಫ್ ಸಿವಿಲ್ ವಾರ್ (1936), ದಿ ಲಾಸ್ಟ್ ಸಪರ್ (1955). ಇವು ಸಾಮಾನ್ಯವಾಗಿ ನಾವು ಚಿತ್ರಕಲಾಪ್ರದರ್ಶನಗಳಲ್ಲಿ ನೋಡುವ ಕೃತಿಗಳಿಗಿಂತ ಬೇರೆ ತೆರನಾಗಿವೆ. ಇವು ನಿಸರ್ಗದ ದೃಶ್ಯಗಳಲ್ಲ, ವ್ಯಕ್ತಿಚಿತ್ರಗಳಲ್ಲ, ಅಮೂರ್ತಶೈಲಿಯ ಚಿತ್ರಗಳೂ ಅಲ್ಲ. ಇವೆಲ್ಲಕ್ಕಿಂತ ಬೇರೆ ರೀತಿಯವು. ಮನಶ್ಯಾಸ್ತ್ರದಲ್ಲಿ ಹೇಳುವ ಆತ್ಮe್ಞÁನಪ್ರಚೋದಕ (ಮೆಟಫಿಸಿಕಲ್) ವರ್ಗಕ್ಕೆ ಬಹುಶಃ ಸೇರಿಸಬಹುದು. ಡಾಲೀಯ ಅನೇಕ ಕೃತಿಗಳು ಸ್ವಪ್ನಾವಸ್ಥೆಯ ಛಾಯಾಚಿತ್ರಗಳಂತಿವೆ. ಈಗ ನ್ಯೂಯಾರ್ಕಿನ ನವ್ಯಕಲಾಪ್ರದರ್ಶನ ಶಾಲೆಯಲ್ಲಿರುವ ಪರ್ಸಿಸ್ಟೆನ್ಸ್ ಆಫ್ ಮೆಮೊರಿ ಎಂಬ ಕೃತಿ ಫ್ರಾಯ್ಡನಿಂದ ಸ್ಫೂರ್ತಿ ಪಡೆದಂತಿದೆ. ಬಹು ನವಿರಾದ ಆದರೆ ಖಚಿತವಾದ ರೇಖೆ ಹಾಗೂ ಸಛಾಯಾ ಬಣ್ಣಗಳಿಂದ ರಚಿಸಿದ ಈ ಕೃತಿಯಲ್ಲಿ ಭ್ರಾಂತ ಸ್ವಪ್ನಲೋಕ ಅರ್ಥಪೂರ್ಣವಾಗಿ ಮೂಡಿಬಂದಿದೆ.

	ಡಾಲೀ ಆರಿಸಿಕೊಂಡ ಕಲಾವಸ್ತು ಕೆಲವೊಮ್ಮೆ ಬಾಹ್ಯಸ್ಫೂರ್ತಿಯನ್ನು ಅವಲಂಬಿಸಿರುತ್ತಿತ್ತು. ಅಟಾಮಿಕ್ ಲಿಡಾ ಅಂಡ್ ಸ್ವಾನ್ ಎಂಬ ಕೃತಿಯನ್ನು ಉದಾಹರಿಸಬಹುದು. ಇದರಲ್ಲಿ ಇಪ್ಪತ್ತನೆಯ ಶತಮಾನದ ಪರಮಾಣುಯುಗಕ್ಕೆ ಡಾಲೀಯ ಸಂದಿಗ್ಧ ಪ್ರತಿಕ್ರಿಯೆ ಏನೆಂಬುದು ಮಾರ್ಮಿಕವಾಗಿ ಮೂಡಿದೆ. ವಾಷಿಂಗ್ಟನ್ನಿನ ನ್ಯಾಷನಲ್ ಗ್ಯಾಲರಿಯಲ್ಲಿರುವ ದಿ ಲಾಸ್ಟ್ ಸಪರ್ (1955) ಎಂಬ ಕೃತಿಯನ್ನು ಕಲಾವಿದನದೇ ಆದ ಆತ್ಮe್ಞÁನಪ್ರಚೋದಕ ಶೈಲಿಯಲ್ಲಿ ನಿರೂಪಿಸಲಾಗಿದೆ. ಗ್ಲಾಸ್ಕೋದಲ್ಲಿರುವ ಮೊಂಗ್ ಧಾರ್ಮಿಕ ವಸ್ತು ಸಂಗ್ರಹಾಲಯದಲ್ಲಿ ಈತನ ಪುಸ್ತಕ ಕ್ರೈಸ್ತ್ ಆಫ್ ಸೇಂಟ್‍ಜಾನ್ ಆಫ್ ದಿ ಕ್ರಾಸ್ (1951) ಪ್ರದರ್ಶನಕ್ಕಿಡಲಾಗಿದೆ. ಒಟ್ಟಿನಲ್ಲಿ ಡಾಲೀಯ ಬಹುತೇಕ ಕೃತಿಗಳಲ್ಲಿ ಸ್ವಪ್ನಾವಸ್ಥೆಯ ವಿಚಿತ್ರಕಲ್ಪನೆಗಳು ಸಾಂಕೇತಿಕವಾಗಿ ನಿರೂಪಿಸಲ್ಪಟ್ಟಿವೆ ಎನ್ನಬಹುದು. ದಿ ಸೀಕ್ರೆಟ್ ಲೈಪ್ ಆಫ್ ಸಾಲ್ವಡಾರ್ ಡಾಲೀ, ಫಿಫ್ಟಿ ಸೀಕ್ರೆಟ್ಸ್ ಆಫ್ ದಿ ಆರ್ಟ್ ಆಫ್ ಮ್ಯಾಜಿಕ್ ಮುಂತಾದ ಡಾಲೀಯ ಆತ್ಮಾಕಥಾ ಕೃತಿಗಳು ಆತನ ಕಲೆಯ ಅಂತಸ್ಸತ್ತ್ವವಕ್ಕೆ ಕನ್ನಡಿಹಿಡಿದಂತಿವೆ.

	ಡಾಲೀ ಅನೇಕ ರಂಗಗಳಲ್ಲಿ ಸಿದ್ಧಹಸ್ತನಾಗಿದ್ದ: ಆಭರಣಗಳ ಕುಸುರಿ ಕೆಲಸದ ನಕ್ಷೆ ತಯಾರಿಸುವುದು, ಬ್ಯಾಲೆ ನೃತ್ಯದ ವಸ್ತ್ರಾಲಂಕಾರವಿನ್ಯಾಸ ರಚಿಸುವುದು, ಪುಸ್ತಕಗಳಿಗೆ ಚಿತ್ರ ತಯಾರಿಸುವುದು ಮುಂತಾದುವನ್ನು ಇಲ್ಲಿ ಹೆಸರಿಸಬಹುದು. ಡಾನ್ ಕ್ವಿಕ್ಸಟ್ ಎಂಬ ಪುಸ್ತಕಕ್ಕೆ ಚಿತ್ರಗಳನ್ನು ಈತನೇ ರಚಿಸಿದ (1946).	ರಾಬರ್ಟ್ ಡಿಸ್‍ಚಾರನ್ಸ್‍ರವರು 1986ರಲ್ಲಿ ಸಾಲ್ವಡಾರ್ ಡಾಲೀ ಗ್ರಂಥವನ್ನು ಪ್ರಕಟಿಸಿದರು.
(ಎಚ್.ಆರ್.ಆರ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ